ಪೂರ್ವಾಶ್ರಮದಲ್ಲಿ ಬಾಳಾಚಾರ್ಯರೆಂದು ಪ್ರಸಿದ್ಧ ಪಂಡಿತರಾಗಿ ಮೈಸೂರು ರಾಜರ ಆಸ್ಥಾನದಲ್ಲಿ ವಿದ್ವನ್ಮಣಿಗಳ ಸಮೂಹದಲ್ಲಿ ಪ್ರಕಾಶಿಸುತ್ತಿದ್ದರು. ಅಂದಿನ ರಾಜರುಗಳು ವಿದ್ವಾಂಸರುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರು. ಅವರುಗಳಿಗೆ ಸೌಕರ್ಯ, ಸವಲತ್ತುಗಳನ್ನು ಅರಮನೆಯಿಂದ ಒದಗಿಸುತ್ತಿದ್ದರು. ಪಂ. ಬಾಳಾಚಾರ್ಯರನ್ನು ರಾಜರು ವಿಶೇಷವಾಗಿ ಗೌರವಿಸುತ್ತಿದ್ದರು. ಆಚಾರ್ಯರು ನ್ಯಾಯಶಾಸ್ತ್ರದಲ್ಲಿ ಮಹಾ-ಪಂಡಿತರು. ಉತ್ತಮ ವಾಗಿಗಳೂ ಆಗಿದ್ದರು.
ಶ್ರೀ ಸತ್ಯಸಂಕಲ್ಪತೀರ್ಥರು ತಮ್ಮ ಅಂತ್ಯಕಾಲದಲ್ಲಿ ಮೇಲ್ಕಂಡ ಘೋಳಿ ಬಾಳಾಚಾರ್ಯರಿಗೆ ಸನ್ಯಾಸಾಶ್ರಮವನ್ನು ನೀಡಿ ಶ್ರೀ ಸತ್ಯಸಂತುಷ್ಟತೀರ್ಥರೆಂದು ನಾಮಕರಣ ಮಾಡಿ ಹಂಸನಾಮಕ ಪರಮಾತ್ಮನಿಂದ ಪ್ರವರ್ತಿತನಾದ ಈ ಪರಂಪರೆಯಲ್ಲಿ ಅವರನ್ನು ಉತ್ತರಾಧಿಕಾರಿಗಳೆಂದು ನಿಯಮಿಸಿದರು. ಗುರುಗಳಲ್ಲಿ ಮುಂಚಿನಿಂದಲೂ ವಿಶೇಷ ಭಕ್ತಿಯುಳ್ಳವರಾಗಿ, ಅವರ ಸೇವಾನಿರತರಾಗಿ ಶಾಸ್ತ್ರಾಧ್ಯಯನ ಮಾಡಿರುವ ಮಹನೀಯರು.
ಗುರುಗಳ ವೃಂದಾವನವನ್ನು ನಿರ್ಮಿಸಿ, ಗುರುಗಳ ಮಹಾಸಮಾರಾಧನೆ-ಯನ್ನು ಅತ್ಯಂತ ವೈಭವದಿಂದ ವಸ್ತ್ರ, ಧನ-ಕನಕಾದಿಗಳನ್ನು ನೆರೆದಿದ್ದ ವಿದ್ವಾಂಸರಿಗೆ, ಬ್ರಾಹ್ಮಣರಿಗೆ ವಿತರಿಸಿರುವ ಐತಿಹ್ಯವಿದೆ. ಆಸ್ಥಾನ ವಿದ್ವಾಂಸರೊಬ್ಬರು ಒಂದು ದೊಡ್ಡ ಪರಂಪರೆಯ ಪೀಠಾರೋಹಣ ಮಾಡಿದ್ದಾರೆ ಎಂದು ರಾಜರ ಗಮನದಲ್ಲಿತ್ತು. ರಾಜರು ಅವರನ್ನು ಅರಮನೆಗೆ ವೈಭವದಿಂದ ಆಹ್ವಾನಿಸಿ, ಯಥೋಚಿತ ಗೌರವಗಳನ್ನು ಸಲ್ಲಿಸಿ - ಸಂಸ್ಥಾನದ ಪೂಜೆ ಏರ್ಪಡಿಸಿ ಧನ್ಯತೆಯನ್ನು ಪಡೆದರು. ಅವರು ಪೂರ್ವಾಶ್ರಮದಲ್ಲಿ ಪ್ರತಿವಾದಿ ಭಯಂಕರ-ರೆಂದೆನಿಸಿ, ಅವರುಗಳನ್ನು ನಿರಾಯಾಸವಾಗಿ ನಿರುತ್ತರರನ್ನಾಗಿ ಮಾಡುತ್ತಿದ್ದುದ ರಿಂದ 'ಶಾಸ್ತ್ರಗೂಳಿ' ಎಂಬ ಪರ್ಯಾಯ ಪದದಿಂದ ಇವರನ್ನು ಇತರರು ಗುರುತಿಸುತ್ತಿದ್ದರು.
ಇನ್ನೊಂದು ಐತಿಹ್ಯದ ಪ್ರಕಾರ (ಪೂರ್ವಿಕರಿಂದ ಶ್ರುತವಾದದ್ದು) : ಶ್ರೀ ಬಾಳಾ-
ಚಾರ್ಯರು ಮೈಸೂರು ರಾಜರ ಆಸ್ಥಾನದ ಪಂಡಿತರುಗಳಲ್ಲಿ ಒಬ್ಬರಾಗಿದ್ದರು. ಪ್ರತಿವರ್ಷ ನವರಾತ್ರಿ ಉತ್ಸವವನ್ನು ಮೈಸೂರು ರಾಜರುಗಳು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಎಲ್ಲ ವಿದ್ವಾಂಸರಿಗೆ ಆ ಸಂದರ್ಭದಲ್ಲಿ ವಿಶೇಷ ಗೌರವ ರಾಜರು ನೀಡುತ್ತಿದ್ದರು. ಅಂದಿನ ರಾಜರಾಗಿದ್ದ ಮುಮ್ಮುಡಿ ಕೃಷ್ಣರಾಜ ಒಡೆಯರ್ರವರಿಗೆ ಆ ಕಾಲದ ರೂಢಿಯಂತೆ ಪಟ್ಟದ ರಾಣಿ ಮತ್ತು ಉಪಪತ್ನಿಯರಿದ್ದರು. ಒಮ್ಮೆ ನವರಾತ್ರಿಯ ಹಿಂದಿನ ದಿನಗಳಲ್ಲಿ ಉಪಪತ್ನಿಯಲ್ಲಿ ಜನನವಾಗಿದ್ದ ಬಾಲ್ಯಾವಸ್ಥೆಯಲ್ಲಿದ್ದ ಕುಮಾರನು ಗತಿಸಿದನು. ರಾಜರ ಆಸ್ಥಾನದಲ್ಲಿದ್ದ ಅದೈತ ಪಂಡಿತರು ರಾಜನಿಗೆ ಅಶೌಚ ಉಂಟಾಗಿರುವುದರಿಂದ ನವರಾತ್ರಿ ಉತ್ಸವವನ್ನು ಆಚರಣೆ ಮಾಡುವುದಕ್ಕೆ ಬರುವುದಿಲ್ಲವೆಂದು ರಾಜರಿಗೆ ಹೇಳಿಕಳುಹಿಸಿದರು. ರಾಜರು ಇನ್ನುಳಿದ ಪ್ರಮುಖ ಆಸ್ಥಾನ ವಿದ್ವಾಂಸರ ಅಭಿಪ್ರಾಯವನ್ನೂ ತೆಗೆದುಕೊಳ್ಳುವವರಾದರು. ಆ ವಿದ್ವಾಂಸರು ಅನ್ಯರೀತಿ ಅಭಿಪ್ರಾಯವನ್ನು ನೀಡಿದರು. ಆ ಸಂದರ್ಭದಲ್ಲಿ ರಾಜರು ವಿಷಯನಿರ್ಣಯಕ್ಕೋಸ್ಕರ ಒಂದು ಸಭೆಯನ್ನು ಏರ್ಪಡಿಸಿ, ವಿದ್ವಾಂಸರಿಗೆ ಚರ್ಚೆಗೆ ಅವಕಾಶ ಮಾಡಿಕೊಟ್ಟರು. ಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟ ವಿಷಯವಾಗಿತ್ತು. ಈ ಶಾಸ್ತ್ರದಲ್ಲಿ ಆಳವಾದ ಅಧ್ಯಯನ ಮಾಡಿದ್ದ ಪಂಡಿತರುಗಳು ಮಾತ್ರ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಪಂಡಿತ ಬಾಳಾಚಾರ್ಯರಿಗೆ ಧರ್ಮಶಾಸ್ತ್ರದಲ್ಲಿಯೂ ಪ್ರಾವಿಣ್ಯ ಇದ್ದುದರಿಂದ ಉಪಪತ್ನಿಯಲ್ಲಿ ಹುಟ್ಟಿದ ಬಾಲಕನ ಮರಣದಿಂದ ರಾಜರಿಗೆ ಅಶೌಚ ಉಂಟಾಗುವುದಿಲ್ಲವೆಂದೂ ಮತ್ತು ಈ ಕಾರಣದಿಂದ ರಾಜರು ಆಚರಿಸುವ ನವರಾತ್ರಿ ಉತ್ಸವಕ್ಕೆ ಬಾಧಕವಾಗುವುದಿಲ್ಲವೆಂದು ಪುಷ್ಟಿಕರಿಸಿದರು. ಈ ಸಂದರ್ಭದಲ್ಲಿ ಆಚಾರ್ಯರು ಪ್ರಮಾಣ ವಾಕ್ಯಗಳನ್ನು ಮುಖೋದ್ಗತವಾಗಿ ತಿಳಿಸುತ್ತಾ ಪ್ರತಿವಾದಿಗಳನ್ನು ರಭಸವಾಗಿ ಮತ್ತು ವಾಕ್ ಚಾತುರ್ಯವುಳ್ಳವರಾಗಿ ಎದುರಿಸಿ ತಮ್ಮ ವಾದವನ್ನು ಸಮರ್ಥಿಸಿದ ಕ್ರಮವನ್ನು ರಾಜರು ಗಮನಿಸಿ, ಬಾಳಾಚಾರ್ಯರಿಗೆ 'ಘೋಳಿ' ಪ್ರಶಸ್ತಿಕೊಟ್ಟರು. ಅಂದಿನಿಂದ ಅವರು ಘಳಿ ಬಾಳಾಚಾರ್ಯರೆಂದು ಪ್ರಸಿದ್ಧರಾದರು.
ಅಂದಿನ ಕಾಲದ ರಾಜರಿಗೆ ತಮ್ಮ ಆಸ್ಥಾನದಲ್ಲಿ ಗೌರವಕ್ಕೆ ಪಾತ್ರರಾಗಿದ್ದ ಪ್ರಸಿದ್ಧ ವಿದ್ವಾಂಸರುಗಳ ಬಗೆಗೆ ಬಹಳ ಆದರವಿತ್ತು. ಒಮ್ಮೆ ಪೂನಾದಿಂದ ಅದೈತ ಮತಾನುಯಾಯಿಗಳಾದ ಪ್ರಸಿದ್ಧ ವಿದ್ವಾಂಸರಾಗಿದ್ದ ತ್ರಯಂಬಕಶಾಸ್ತ್ರಿಗಳೆಂಬುವರು ಮೈಸೂರಿಗೆ ಆಗಮಿಸಿ, ತನ್ನ ಜೊತೆಗೆ ವಾದ ಮಾಡುವಂತಹ ವಿದ್ವಾಂಸರನ್ನು ಗುರುತಿಸಿ, ಅವರ ಜೊತೆ ಚರ್ಚೆಗೆ ಅವಕಾಶ ಮಾಡಿರಿ - ಎಂದು ರಾಜರ ಗಮನಕ್ಕೆ ಬರುವಂತೆ ಹೇಳಿಕಳುಹಿಸಿದರು. ಆ ಪಂಡಿತರು ತಂದಿದ್ದ ಪೂನಾ ಪೇಷ್ಟೆಯ ಶಿಫಾರಸು ಪತ್ರವನ್ನೂ ರಾಜರಿಗೆ ತಲುಪಿಸಿದರು. ಆಗಿನ ಕಾಲದಲ್ಲಿ ವಾಕ್ಯಾರ್ಥವೇ ಪಾಂಡಿತ್ಯಕ್ಕೆ ಹೆಗ್ಗುರುತಾಗಿತ್ತು. ಸಭೆ ಏರ್ಪಾಡಾಯಿತು. ರಾಜರು ತಮ್ಮ ಸಂಸ್ಥಾನಕ್ಕೆ ಕೀರ್ತಿಯನ್ನುಂಟು ಮಾಡುವಂತೆ ಆಸ್ಥಾನದ ವಿದ್ವಾಂಸರ ಕಡೆ ನೋಡಿದರು. ಎಲ್ಲಿಯೋ ಮೂಲೆಯಲ್ಲಿದ್ದು ಶ್ರೀಕಾಶೀ ತಿಮ್ಮಣ್ಣಾಚಾರ್ಯರು ಮುಂದೆ ಬಂದು ರಾಜರಿಗೆ ಆಶಿಗ್ವಾದಮಾಡಿ, ಪುಣೆಯಿಂದ ಬಂದಿದ್ದ ಶಾಸ್ತ್ರಿಗಳ ಎದುರಿನಲ್ಲಿ ಕುಳಿತರು. ಕಾಶೀ ಆಚಾರ್ಯರ ಜೊತೆಗೆ ಶ್ರೀ ಘೋಳಿ ಬಾಳಾಚಾರ್ಯರೂ ಸೇರಿದರು. ಈರ್ವರೂ ಉದ್ದಾಮ ಪಂಡಿತರು.
ಅಪೂರ್ವ ಅಮೋಘ ವಾಕ್ಯಾರ್ಥವನ್ನು ಕೇಳಲು ಇನ್ನೂ ಬಹುಜನ ಸೇರಿದ್ದರು. ಕಾಶೀ ಆಚಾರ್ಯರು ಶಾಸ್ತ್ರಗಳ ಪೂರ್ವ ಪಕ್ಷಗಳನ್ನೆಲ್ಲಾ ಸಹಜವಾಗಿ ವಿಶ್ಲೇಷಣೆ ಮಾಡುತ್ತಾ ಉತ್ತರ ಕೊಡುತ್ತಲಿದ್ದರು. ಈ ವಾಕ್ಯಾರ್ಥದಲ್ಲಿ ೧೩ ಕೋಟಿಗಳು ನಡೆದವು. ಈ ಸಮಗ್ರ ಚರ್ಚೆಯನ್ನು ಕಾಶೀ ಆಚಾರ್ಯರ ಜೊತೆಗಿದ್ದ ಶ್ರೀ ಘೋಳಿ ಬಾಳಾಚಾರ್ಯರು ಒಂದು ಪುಸ್ತಕದಲ್ಲಿ ಬರೆದಿಟ್ಟಿರುವರು. ಅದರಲ್ಲಿಯ ಮೊದಲನೆಯ ಪದ್ಯ:
ಶ್ರೀ ಕೃಷ್ಣರಾಜಸದಸಿ ತ್ರಂಬಕತಿಮ್ಮಣ್ಣಾರ್ಯಶರ್ಮಣೇರ್ಜಾತಃ |
ತತ್ತೋದ್ಯೋತವಿಚಾರಃ ಕಾರ್ತ್ಯೆನಾನೂದ್ಯತೇ ಕುತುಕಾತ್ ॥
ಪ್ರಾರಂಭದ ಈ ಶ್ಲೋಕದಿಂದ ಕೂಡಿರುವ ಪುಸ್ತಕವು ಮೈಸೂರಿನ ಪ್ರಾಚ್ಯವಿದ್ಯಾ- ಸಂಶೋಧನಾಲಯದಲ್ಲಿ ಲಭ್ಯವಿದೆ. ಘೋಳಿ ಆಚಾರ್ಯರ ಕೈಬರಹದ ಪ್ರತಿ ಎಂದು ತಿಳಿಸಲಾಗಿದೆ. (ಕಾಶೀ ತಿಮ್ಮಣ್ಣಾಚಾರ್ಯರ ಮರಿಮಕ್ಕಳಾದ ಶ್ರೀ ಕಾಶೀಪ್ರಾಣೇಶಾಚಾರ್ಯರು ತಮ್ಮ ಹಿರಿಯರ ಚರಿತ್ರೆಯನ್ನು ಬರೆದಿರುವರು. ಮೇಲಿನ ಘಟನೆಯು ಆ ಪುಸ್ತಕದಿಂದ ಆಯ್ದ ವಿಷಯವಾಗಿದೆ.)
ಕಾಶೀ ತಿಮ್ಮಣ್ಣಾಚಾರ್ಯರಿಂದ ರಚಿತ ಗ್ರಂಥಗಳೂ ದೊರಕುತ್ತವೆ (ಕೆಲವು ಮಾತ್ರ ಪ್ರಕಟಿತವಾಗಿವೆ). ಈ ಕಾಶೀ ತಿಮ್ಮಣ್ಣಾಚಾರ್ಯರ ಕುಟುಂಬದವರೇ ಆದ ಕಾಶೀ ಶ್ರೀನಿವಾಸಾಚಾರ್ಯರು ಶ್ರೀ ಸತ್ಯಸಂತುಷ್ಠತೀರ್ಥರನ್ನು ಕುರಿತು ರಚಿಸಿದ ಸ್ತೋತ್ರ :
ಮಾಯಾವಾದಿಗಜೇಂದ್ರಸಿಂಹಸದೃಶೋ ವೇದಾಂತವಿದ್ಯಾವಿಭುಃ |
ಸತ್ಸಂತುಷ್ಟಮುನೀಶ್ವರೋ ವಿಜಯತೇ ಶ್ರೀ ಕೃಷ್ಣರಾಟ್ಪೂಜಿತಃ ||
ಶ್ರೀಗಳವರಿಗೆ ಅನೇಕ ಶಿಷ್ಯ ವಿದ್ವಾಂಸರಿದ್ದರು. ಆ ಸಮೂಹದಲ್ಲಿ ಮೈಸೂರಿನಲ್ಲಿದ್ದ ಪ್ರಮುಖರಾಗಿದ್ದವರು : ಶ್ರೀ ಹುಲಗೀ ಆಚಾರ್ಯರು (ತದ್ಯುಮಣಿಕಾರರು), ಬ್ರಹ್ಮಾಂಡ ವಿಷ್ಣು ಪಾದಾಚಾರ್ಯರು, ಕಾಶೀ ಆಚಾರ್ಯರು (ಕಾಶೀ ಶ್ರೀನಿವಾಸಾಚಾರ್ಯರು) ಮತ್ತು ಶ್ರೀವೈಷ್ಣವ ಮತಾವಲಂಬಿಗಳಾಗಿದ 'ಆನಂದಾಳ್ವರರು'. ಮೂವರೂ ಗುರುಗಳನ್ನು ಸ್ತುತಿಸಿದ್ದಾರೆ.
ಬ್ರಹ್ಮಾಂಡ ವಿಷ್ಣುಪಾದಾಚಾರ್ಯ ಕೃತಃ -
ವಾದೇ ವಾದಿಜಯೀ ಕಣಾದಸಮಯೇ ಪಾತಂಜಲೇ ಪಂಡಿತಃ |
ಮೀಮಾಂಸಾನಿಪುಣಃ ಶಮಾದಿಸಹಿತಃ ಶ್ರೀರಾಮಚಂದ್ರಪ್ರಿಯಃ ||
ಅದೈತ, ವಿಶಿಷ್ಟಾತ ಮತಗಳನ್ನು ಅನುಸರಿಸುವವರು ಮಧ್ವಪರಂಪರೆ-ಯಲ್ಲಿರುವ ಪೀಠಾಧಿಪತಿಗಳನ್ನು ಗೌರವಿಸಿ ಅವರ ಮೇಲೆ ಸ್ತುತಿರೂಪವಾದ ಕೃತಿಗಳನ್ನು ರಚಿಸಿರುವುದು ಅತ್ಯಂತ ವಿರಳ. ಶ್ರೀ ಸತ್ಯಸಂತುಷ್ಟತೀರ್ಥರ ವಿದ್ವತ್, ವಿನಯ ಇತ್ಯಾದಿ ಗುಣಗಳಿಂದ ವಿಶಿಷ್ಟಾದೈತ ಮತಾವಲಂಬಿ ವಿದ್ವಾಂಸರಾಗಿದ್ದ ಆನಂದ ಆಳ್ವಾರ್ರವರು ಆಕರ್ಷಿತರಾಗಿ - ಗುರುಗಳಿಗೆ ಗೌರವ ಕೊಡುತ್ತಿದ್ದರು.
ಆನಂದಾಳ್ವರರು ವ್ಯಾಕರಣದಲ್ಲಿ ಉನ್ನತ ಮಟ್ಟದ ಪಾಂಡಿತ್ಯವುಳ್ಳವರಾಗಿದ್ದರು. 'ನ್ಯಾಯ ಭಾಸ್ಕರ'ವೆಂಬ ಗ್ರಂಥವನ್ನು ಬರೆದಿದ್ದಾರೆ. ಮದರಾಸಿನ (ಚೆನ್ನೈ) ಅಡ್ಯಾರ್ ಗ್ರಂಥ ಭಂಡಾರದಲ್ಲಿ ಈ ಗ್ರಂಥವು ಉಪಲಬ್ಧವಿದೆ. ಈ ಗ್ರಂಥದ ಮಂಗಳ ಶ್ಲೋಕದ ಸರಣಿಯಲ್ಲಿ ಗುರುಗಳನ್ನು ಸ್ತುತಿಸಿದ್ದಾರೆ.
ಷಡ್ದರ್ಶನಮಹಾರಣ್ಯವಿಹಾರಪಟುಕೇಸರೀ |
ಷಡೈರಿವಿಜಯೀ ಸತ್ಯಸಂತುಷ್ಟೋsಸ್ತು ಸುಸಂವಿದೇ ||
ಚರಮಶ್ಲೋಕ :
ಸತ್ಯಸಂಕಲ್ಪವಾರ್ಧೂತಃ ಸತ್ಯಸಂತುಷ್ಟಚಂದ್ರಮಾಃ | ಪ್ರಾರ್ಥಿತಾಶೇಷದಾತಾ ಚ ಭಕ್ತವೃಂದಸ್ಯ ನಿತ್ಯದಾ ||
|| ಶ್ರೀ ಸತ್ಯಾತ್ಮತೀರ್ಥ ವಿರಚಿತಂ ಶ್ರೀ ಸತ್ಯಸಂತುಷ್ಟತೀರ್ಥ ಸ್ತೋತ್ರಮ್ ||
ಸತ್ಯೇ ನಾರಾಯಣೇ ತುಷ್ಟೋ ಭಕ್ತಿಭಾರೇಣ ಯಃ ಸದಾ |
ಸತ್ಯಸಂತುಷ್ಟನಾಮಾನಂ ಯತಿರಾಜಂ ತಮಾಶ್ರಯೇ || 1 ||
ಅಸಂತುಷ್ಟೋ ಹಿ ಸತ್ಯಾಂ ಯೋ ವೈರಾಗ್ಯಾಧಿಕ್ಯತಃ ಸದಾ |
ಸತ್ಯಸಂತುಷ್ಟನಾಮಾನಂ ಯತಿರಾಜಂ ತಮಾಶ್ರಯೇ || 2||
ಸತ್ಯಂ ಯಃ ಸ್ಥಾಪಯನ್ ವಾದೇ ಸಂತುಷ್ಟೋ ವೃಷವದ್ ಬಲೀ |
ಸತ್ಯಸಂತುಷ್ಟನಾಮಾನಂ ಯತಿರಾಜಂ ತಮಾಶ್ರಯೇ || 3 ||
ಸತ್ಯೇ ಸಾತ್ಯವತೇಯೋಕ್ತ ಸಂತುಷ್ಟೋ ಯಃ ಸದಾ ಸುಧೀಃ |
ಸತ್ಯಸಂತುಷ್ಟನಾಮಾನಂ ಯತಿರಾಜಂ ತಮಾಶ್ರಯೇ || 4 ||