ಜ್ಞಾನಂ ಸುಧಾಕಲಶಮೇವ ಚ ಸಂದಧಾನಂ ಶೀತಾಂಶುಮಂಡಲಗತಂ ಸ್ಮರತಾತ್ಮಸಂಸ್ಥಮ್
ಒಂದು ಕೈಯಲ್ಲಿ ಜ್ಞಾನಮುದ್ರೆಯನ್ನೂ ಮತ್ತೊಂದು ಕೈಯಲ್ಲಿ ಅಮೃತದ ಕಲಶವನ್ನೂ ಹೊತ್ತಿರುವ ಧನ್ವಂತರಿ ಚಂದ್ರಮಂಡಲದಲ್ಲಿ ಹೇಗೋ ಹಾಗೆ ನಮ್ಮಶರೀರದಲ್ಲೂ ಇರುವನೆಂದು ಧ್ಯಾನಿಸಲು ಕರೆ ಕೊಟ್ಟಿರುವ [ತಂತ್ರಸಾರ ಸಂಗ್ರಹ ೪-೯೫] ಶ್ರೀ ಮಧ್ವರು ನಮ್ಮ ಶರೀರದಲ್ಲಿ ಧನ್ವಂತರಿಯನ್ನು ಎಲ್ಲಿ, ಹೇಗೆ ಧ್ಯಾನಿಸಬೇಕು ಎಂಬುದರ ಬಗ್ಗೆ ಹೀಗೆ ಬೆಳಕು ಚೆಲ್ಲಿರುವರು-
ಮೂರ್ಧ್ನಿಸ್ಥಿತಾದಮುತ ಏವ ಸುಧಾಂ ಸ್ರವಂತೀಂ ಭ್ರೂಮಧ್ಯಗಾಚ್ಚ ತತ ಏವ ಚ ತಾಲುಸಂಸ್ಥಾತ್
ಹಾರ್ದಾಚ್ಚ ನಾಭಿಸದನಾದಧರಸ್ಥಿತಾಚ್ಚ ಧ್ಯಾತ್ವಾಽಭಿಪೂರಿತತನುರ್ದುರಿತಂ ನಿಹನ್ಯಾತ್
ಶರೀರದ ನೆತ್ತಿಯಲ್ಲಿ, ಹುಬ್ಬುಗಳ ಮಧ್ಯದಲ್ಲಿ, ಕಿರುನಾಲಿಗೆಯಲ್ಲಿ, ಹೃದಯದಲ್ಲಿ, ನಾಭಿಯಲ್ಲಿ ಹಾಗೂ ಮೂಲಾಧಾರದಲ್ಲಿ ಇದ್ದುಕೊಂಡು ಧನ್ವಂತರಿ ಸುರಿಸುತ್ತಿರುವ ಅಮೃತದ ಧಾರೆಯನ್ನು ಧ್ಯಾನಿಸಿ ಅದರಿಂದಾಗಿ ತನ್ನ ಶರೀರವೆಲ್ಲ ತೊಯ್ದಂತೆ ಅನುಸಂಧಾನ ಮಾಡಿಕೊಂಡು ತನ್ನ ಪಾಪವನ್ನೆಲ್ಲ ಪರಿಹರಿಸಿಕೊಳ್ಳಬೇಕು.
ಈ ನಿರೂಪಣೆಯ ಪ್ರಕಾರ ಧನ್ವಂತರಿ ಪ್ರತಿಯೊಬ್ಬರ ಶರೀರದಲ್ಲೂ ಆರು ನಾಡಿಕೇಂದ್ರಗಳಲ್ಲಿ ನೆಲೆಸಿರುವನು.
* ನೆತ್ತಿಯಲ್ಲಿರುವ ಹನ್ನೆರಡು ದಳಗಳ “ಸಹಸ್ರಾರ” ಎಂಬ ನಾಡೀಚಕ್ರ
* ಹುಬ್ಬುಗಳ ಮಧ್ಯದಲ್ಲಿ ನಾಲ್ಕು ದಳಗಳ “ಆಜ್ಞಾ” ಚಕ್ರ
* ಕಿರುನಾಲಿಗೆಯಲ್ಲಿ ಎರಡು ದಳಗಳ “ವಿಶುದ್ಧಿ” ಚಕ್ರ
* ಹೃದಯದಲ್ಲಿ ಎಂಟು ದಳಗಳ “ಅನಾಹತ” ಚಕ್ರ
* ನಾಭಿಯಲ್ಲಿ ಆರು ದಳಗಳ “ಮಣಿಪೂರ” ಚಕ್ರ
* ಜನನೇಂದ್ರಿಯದ ಮೂಲದಲ್ಲಿರುವ ನಾಲ್ಕು ದಳಗಳ “ಮೂಲಾಧಾರ” ನಾಡೀಚಕ್ರ
ಶರೀರದ ಯಾವುದಾದರೊಂದು ನಾಡೀಚಕ್ರದಲ್ಲಿದ್ದುಕೊಂಡು ಸಮಗ್ರ ಶರೀರದ ಮೇಲೆ ಅಮೃತವನ್ನು ಸುರಿಸುವ ಬದಲು ದೇಹದ ಆರು ಕೇಂದ್ರಗಳಲ್ಲಿ ನೆಲೆಸಿದ್ದು ಅಮೃತದ ಸುರಿಸುವಿಕೆಯನ್ನು ನಡೆಸುವ ಉದ್ದೇಶವಾದರೂ ಸ್ಮೃತಿಕೀರ್ತನಪ್ರಣತಿ-ಭಿರ್ವಿಮುಕ್ತಯೇ ಸ್ವಜನಸ್ಯ ಯಾತ್ಯಯಮನೇಕರೂಪತಾಮ್' ಎಂದು ಮಧ್ವವಿಜಯದಲ್ಲಿ ಅನೇಕ ರೂಪಗಳ ಧಾರಣೆಯ ಬಗ್ಗೆ ತಿಳಿಸಿರುವಂತೆ ಸಾಧಕರು, ಭಕ್ತರು ತನ್ನ ಈ ಬಗೆಯ ಲೀಲೆಯನ್ನು ಮಹಿಮೆಯನ್ನು ಅನುಸಂಧಾನ ನಡೆಸುವಂತಾಗಲೆಂಬುದೇ.
ಹೀಗೆ ಭಕ್ತರ ಅನುಸಂಧಾನ ಸೌಲಭ್ಯಕ್ಕಾಗಿ ಪ್ರತಿಯೊಬ್ಬರ ಶರೀರದಲ್ಲಿ ಮತ್ತೆ ಮತ್ತೆ ನೆಲೆಸಿರುವ ಅವನ ಲೀಲೆಯನ್ನು ಷಟ್ಟು ನಾಡಿಕೇಂದ್ವೇಷು ಪುನಃ ಪುನಃ ವಸತೀತಿ ಪುನರ್ವಸು:' ಆರು ನಾಡೀಕೇಂದ್ರಗಳಲ್ಲಿ ಮತ್ತೆ ಮತ್ತೆ ನೆಲೆಸಿರುವವನು -ಎಂದು ಪುನರ್ವಸು ನಾಮಾರೂಢವಾಗಿ ಅನುಸಂಧಾನ ಮಾಡಬಹುದು.
ಹಾಗೆಯೇ ಆರು ನಾಡೀಕೇಂದ್ರಗಳಲ್ಲಿ ನೆಲೆಸಿರುವುದಷ್ಟೇ ಅಲ್ಲದೆ ಯಾವುದೋ ಒಂದು ನಾಡೀಕೇಂದ್ರದಲ್ಲಿರುವ ರೂಪದಿಂದಷ್ಟೇ ಅಮೃತಸಿಂಚನ ಮಾಡದೆ, ಆ ಆರೂ ನಾಡೀಕೇಂದ್ರಗಳಲ್ಲಿದ್ದುಕೊಂಡು ಅಮೃತಸಿಂಚನ ಮಾಡುತ್ತಿದ್ದಾನೆ. ಅಮೃತಸಿಂಚನದಿಂದಾಗಿ ಶರೀರದ ಸ್ವಾಸ್ಥ್ಯ ಸಿದ್ಧಿಸುವುದಲ್ಲದೆ ನಾಡೀಕೇಂದ್ರಗಳ ಮೇಲೆ ಸಂಭವಿಸುವ ಅಮೃತದ ವಿಶೇಷ ಸಂಪರ್ಕದಿಂದಾಗಿ ಅವು ಅತ್ಯಂತ ಪವಿತ್ರಗಳಾಗಿ ಅವುಗಳಲ್ಲಿ ಅಧ್ಯಾತ್ಮಶಕ್ತಿ ಅಧಿಕವಾಗಿ ಜಾಗೃತವಾಗುವುದು. ಹೀಗೆ ಆರು ನಾಡೀಕೇಂದ್ರಗಳಲ್ಲಿ ನಡೆಸಲಾಗುವ ಅಮೃತದ ಸಿಂಚನ ದೈಹಿಕ ಸ್ವಾಸ್ಥ್ಯಕ್ಕೂ, ಆಧ್ಯಾತ್ಮಿಕಶಕ್ತಿಯ ಜಾಗೃತಿಗೂ ಪ್ರಯೋಜಕವಾಗಿರುವ ಪ್ರಯುಕ್ತ ಸಂಪತ್ತಿನ ರೂಪದಲ್ಲಿ ಇರುವಂತಹದ್ದು. ಈ ಬಗೆಯ ವಸುವನ್ನು ಸಂಪತ್ತನ್ನು ಆರೂ ನಾಡೀಕೇಂದ್ರ ಗಳಲ್ಲಿದ್ದುಕೊಂಡು ಮತ್ತೆ ಮತ್ತೆ ಅನುಗ್ರಹಿಸುತ್ತಿರುವ ಧನ್ವಂತರಿಯ ಅನುಗ್ರಹವನ್ನು 'ಪುನಃ ಪುನಃ ವಸು ಅಮೃತಸ್ರಾವಾತ್ಮಿಕಾ ಸಂಪತ್ ಯಸ್ಮಾತ್ ಸಃ ಪುನರ್ವಸುಃ' ಎಂದು ಪುನರ್ವಸುವಿನ ಅನುಗ್ರಹದ ಅನುಸಂಧಾನ.
ಕ್ಷೀರಸಾಗರದ ಮಥನದ ಪ್ರಸಂಗದಲ್ಲಿ ಪ್ರಾದುರ್ಭವಿಸಿದ ಧನ್ವಂತರಿ ಅಮೃತ ಕಲಶವನ್ನು ತರುವ ಮೂಲಕ ಅನುಗ್ರಹಿಸಿದ್ದರೆ, ಪ್ರತಿಯೊಬ್ಬರ ಪಿಂಡಾಂಡದಲ್ಲೂ ಆರು ನಾಡೀಕೇಂದ್ರಗಳಲ್ಲಿ ಮತ್ತೆ ಮತ್ತೆ ನೆಲೆಸಿ ಅಮೃತವನ್ನು ಆ ಆರು ನಾಡೀಕೇಂದ್ರ ಗಳಿಂದಲೂ ಮತ್ತೆ ಮತ್ತೆ ಅಮೃತವನ್ನು ಸುರಿಸುತ್ತ ನಡೆಸುವ ಲೀಲೆಯನ್ನು ಪುನರ್ವಸು ಎಂಬ ನಾಮಾರೂಢವಾಗಿ ಹೀಗೆ ಅನುಸಂಧಾನ ಮಾಡೋಣ.
ಶ್ರೀವಿಷ್ಣುಪುರಾಣ
ತತೋ ಧನ್ವಂತರಿರ್ದವಃ ಶ್ವೇತಾಂಬರಧರಃ ಸ್ವಯಮ್ |
ಬಿಭ್ರತ್ ಕಮಂಡಲುಂ ಪೂರ್ಣಮಮೃತಸ್ಯ ಸಮುತ್ಥಿತಃ |
ಶ್ರೀಮತ್ತ್ವಪುರಾಣ
ಮಥ್ಯಮಾನೇ ಪುನಸ್ತಸ್ಮಿನ್ ಜಲಧೌ ಸಮದೃಶ್ಯತ |
ಧನ್ವಂತರಿಃ ಸ ಭಗವಾನ್ ಆಯುರ್ವೇದಪ್ರಜಾಪತಿಃ ||
ಶ್ರೀವಾಯುಪುರಾಣ
ಧನ್ವಂತರೇ ಚಿದಾನಂದಸ್ವರೂಪಿನ್ ವಿಶ್ವಭೇಷಜ |
ಅಪಥ್ಯಜಾನ್ಮಹಾದುಃಖಾತ್ ಕುರು ಮಾಧವ ರಕ್ಷಣಮ್ ||
ಶ್ರೀಗರುಡಪುರಾಣ
ತತೋ ಹರಿಃ ಪ್ರಾದುರಭೂನ್ಮಹಾತ್ಮಾ ಧನ್ವಂತರಿರ್ನಾಮ ಹರಿನ್ಮಣಿದ್ಯುತಿಃ |
ಅಪಥ್ಯದೋಷಾನ್ ಪರಿಹರ್ತುಮೇವ ಹಸ್ತೇ ಗೃಹೀತ್ವಾ ಪೂರ್ಣಕುಂಭಂ ಸುಧಾಭಿಃ ||
ಪ್ರಾರ್ಥನೆ
ಧನ್ವಂತರೇಂಗರುಚಿ ಧನ್ವಂತರೇರಿತರುಧನ್ವಂಸ್ತರೀ ಭವ ಸುಧಾ ।
ಭಾನ್ವಂತರಾವಸಥ ಮನ್ವಂತರಾಧಿಕೃತತನ್ವಂತರೌಷಧನಿಧೇ ||
ಧನ್ವಂತರಂಗಶುಗುದನ್ವಂತಮಾಜಿಷು ವಿತನ್ವನ್ಮಮಾಬಿತನಯಾ |
ಸೂನ್ವಂತಕಾತ್ಮಹೃದತನ್ವಂತರಾವಯವತನ್ವಂತರಾರ್ತಿಜಲರೌ || - ಶ್ರೀ ವಾದಿರಾಜತೀರ್ಥರು
ಭಾವಾರ್ಥ :- ಕಾಂತಿಯುಕ್ತನಾದ ಸೂರ್ಯನಂತೆ ಇದ್ದಾನೆ. ಅಮೃತಕಿರಣಗಳುಳ್ಳ ಚಂದ್ರನಲ್ಲಿದ್ದಾನೆ. ಔಷಧಿಗಳಿಗೆ ಆಶ್ರಯನಾಗಿದ್ದಾನೆ. 'ನಾರಾಯಣೀ' ಸ್ತ್ರೀರೂಪದಿಂದ ರುದ್ರನ ಮನಸ್ಸನ್ನು ಅಪಹರಿಸಿದ್ದಾನೆ. ಅನೇಕ ಮಹಿಮೆಗಳುಳ್ಳ ಹೇ ಧನ್ವಂತರಿಯೇ ಸಂಸಾರವೆಂಬ ದುಃಖ ಸಮುದ್ರದಲ್ಲಿ ಬಿದ್ದಿರುವ ನನ್ನನ್ನು, ದೋಣಿಯಂತೆ ನೀನು ಇರುವವನಾಗಿರುವುದರಿಂದ ನನ್ನನ್ನು ದಾಟಿಸಿ ಪಾರುಮಾಡು.
ಮೂರ್ಧ್ನಿಸ್ಥಿತಾದಮುತ ಏವ ಸುಧಾಂ ಸ್ರವಂತೀಂ
ಭ್ರೂಮಧ್ಯಗಾಚ್ಚ ತತ ಏವ ಚ ತಾಲುಸಂಸ್ಥಾತ್ |
ಹಾರ್ದಾಚ್ಚ ನಾಭಿ ಸದನಾದಧರಸ್ಥಿತಾಚ್ಚ
ಧ್ಯಾತ್ವಾಭಿಪೂರಿತತನುರ್ದುರಿತಾನಿ ಹನ್ಯಾತ್ ||
ಶರೀರದ ನೆತ್ತಿಯಲ್ಲಿ ಹುಬ್ಬುಗಳ ಮಧ್ಯದಲ್ಲಿ ಕಿರುನಾಲಿಗೆಯಲ್ಲಿ ಹೃದಯದಲ್ಲಿ ನಾಭಿಯಲ್ಲಿ ಹಾಗೂ ಮೂಲಾಧಾರದಲ್ಲಿ ಇದ್ದುಕೊಂಡು ಅಮೃತ ಸುರಿಸುತ್ತಿರುವ ಧನ್ವಂತರಿಯನ್ನು ಧ್ಯಾನಿಸುತ್ತಾ ಅದರಿಂದಾಗಿ ತನ್ನ ಶರೀರವೆಲ್ಲ ತೊಯ್ದಂತೆ ಸಾಧಕನು ಅನುಸಂಧಾನ ಮಾಡಿಕೊಂಡಾಗ ಪಾಪಗಳು ಪರಿಹಾರವಾಗುವವು.
ಈ ನಿರೂಪಣೆಯ ಪ್ರಕಾರ ಧನ್ವಂತರಿ ಪ್ರತಿಯೊಬ್ಬರ ಶರೀರದಲ್ಲೂ ಆರು ನಾಡಿಕೇಂದ್ರಗಳಲ್ಲಿ ನೆಲೆಸಿರುವನು. ನೆತ್ತಿಯಲ್ಲಿರುವ ಹನ್ನೆರಡು ದಳಗಳ ಸಹಸ್ರಾರ ಎಂಬ ನಾಡೀಚಕ್ರ - ಹುಬ್ಬುಗಳ ಮಧ್ಯದಲ್ಲಿ ನಾಲ್ಕು ದಳಗಳ ಆಜ್ಞಾಚಕ್ರ, ಕಿರುನಾಲಿಗೆಯಲ್ಲಿ ಎರಡು ದಳಗಳ ವಿಶುದ್ಧಿಚಕ್ರ, ಹೃದಯದಲ್ಲಿ ಎಂಟು ದಳಗಳ ಅನಾಹತಚಕ್ರ, ನಾಭಿಯಲ್ಲಿ ಆರು ದಳಗಳ ಮಣಿಪೂರಚಕ್ರ, ಜನನೇಂದ್ರಿಯದ ಮೂಲದಲ್ಲಿರುವ ನಾಲ್ಕು ದಳಗಳ. ಮೂಲಾಧಾರ ನಾಡೀಚಕ್ರ,
ಚಂದ್ರಘಕಾಂತಿಮಮೃತೋರುಕರೈರ್ಜಗಂತಿ ಸಂಜೀವಯಂತಮಮಿತಾತ್ಮಸುಖಂ ಪರೇಶಮ್ |
ಜ್ಞಾನಂ ಸುಧಾಕಲಶಮೇವ ಚ ಸಂದಧಾನಂ ಶೀತಾಂಶುಮಂಡಲಗತಂ ಸ್ಮರತಾತ್ಮ ಸಂಸ್ಥಮ್ || (ತ. ಸಂ. 4-95)
(ಭಾವಾರ್ಥ) :- ಅನಂತಚಂದ್ರರ ಕಾಂತಿಯುಕ್ತನು, ತನ್ನ ದಿವ್ಯಕಿರಣಗಳಿಂದ ಜಗತ್ತಿಗೆ ಜೀವಕಳೆಯನ್ನು ತುಂಬುತ್ತಿರುವವನು. ನಿರವಧಿಕ ಸುಖಸ್ವರೂಪನು, ರಮಾಬ್ರಹ್ಮಾದಿಗಳಿಗೂ ಒಡೆಯನು, ಒಂದು ಕೈಯ್ಯಲ್ಲಿ ಜ್ಞಾನಮುದ್ರೆ ಪ್ರದರ್ಶನ ಮಾಡುತ್ತಾ ಮತ್ತು ಇನ್ನೊಂದರಲ್ಲಿ ಅಮೃತಪೂರ್ಣ ಕಳಶವನ್ನು ಧರಿಸಿರುವ ಚಂದ್ರಮಂಡಲದಲ್ಲಿ ಆಸೀನನಾಗಿರುವ ಧನ್ವಂತರಿಮೂರ್ತಿಯನ್ನು ಸಾಧಕನು ತನ್ನಲ್ಲಿ ನೆಲಸಿರುವಂತೆ ಅನುಸಂಧಾನ ಮಾಡಿಕೊಳ್ಳಬೇಕು.
ವಿವರಣೆ : ಭಗವಂತನು ಧನ್ವಂತರಿ ರೂಪದಿಂದ ಚಂದ್ರನಲ್ಲಿ ಅಭಿವ್ಯಕ್ತನಾಗಿ, ಚಂದ್ರನ ಮೂಲಕ ಅಮೃತಯುಕ್ತಿಗಳಾದ ಕಿರಣಗಳನ್ನು ಹೊರಹೊಮ್ಮಿಸುವಂತೆ, ಆ ಧನ್ವಂತರಿ ನಾಮಕ ಶ್ರೀಹರಿಯು ನಮ್ಮ ಶರೀರದಲ್ಲಿರುವ ಆರು ನಾಡೀಕೇಂದ್ರಗಳಲ್ಲಿ ನೆಲೆಸಿರುವುದಷ್ಟೇ ಅಲ್ಲದೆ; ಯಾವುದೋ ಒಂದು ನಾಡೀಕೇಂದ್ರದಲ್ಲಿರುವ ರೂಪದಿಂದಷ್ಟೇ ಅಮೃತಸಿಂಚನ ಮಾಡದೆ, ಆ ಆರೂ ನಾಡೀಕೇಂದ್ರಗಳಲ್ಲಿದ್ದುಕೊಂಡು ಅಮೃತಸಿಂಚನ ಮಾಡುತ್ತಿದ್ದಾನೆ. ಅಮೃತ ಸಿಂಚನದಿಂದಾಗಿ ಶರೀರದ ಸ್ವಾಸ್ಥ್ಯ ಸಿದ್ಧಿಸುವುದಲ್ಲದೆ ನಾಡೀ ಕೇಂದ್ರಗಳ ಮೇಲೆ ಸಂಭವಿಸುವ ಅಮೃತದ ವಿಶೇಷ ಸಂಪರ್ಕದಿಂದಾಗಿ ಅವು ಅತ್ಯಂತ ಪವಿತ್ರಗಳಾಗಿ ಅವುಗಳಲ್ಲಿ ಅಧ್ಯಾತ್ಮಶಕ್ತಿ ಅಧಿಕವಾಗಿ ಜಾಗೃತವಾಗುವುದು. ಹೀಗೆ ಆರು ನಾಡೀಕೇಂದ್ರಗಳಲ್ಲಿ ನಡೆಸಲಾಗುವ ಅಮೃತದ ಸಿಂಚನ ದೈಹಿಕ ಸ್ವಾಸ್ಥ್ಯಕ್ಕೂ ಆಧ್ಯಾತ್ಮಿಕ ಶಕ್ತಿಯ ಜಾಗೃತಿಗೂ ಪ್ರಯೋಜಕವಾಗಿರುವ ಪ್ರಯುಕ್ತ ಸಂಪತ್ತಿನ ರೂಪದಲ್ಲಿ ಇರುವಂತಹದ್ದು. ಈ ಬಗೆಯ ಸಂಪತ್ತನ್ನು ಆರೂ ನಾಡೀಕೇಂದ್ರ ಗಳಲ್ಲಿದ್ದುಕೊಂಡು ಮತ್ತೆ ಮತ್ತೆ ಅನುಗ್ರಹಿಸುತ್ತಿರುವ ಧನ್ವಂತರಿಯ ಅನುಗ್ರಹವನ್ನು ಪ್ರಾರ್ಥಿಸಬೇಕು. ಕ್ಷೀರಸಾಗರದ ಮಥನದ ಪ್ರಸಂಗದಲ್ಲಿ ಪ್ರಾದುಭರವಿಸಿದ ಧನ್ವಂತರಿ ಅಮೃತ ಕಲಶವನ್ನು ತರುವ ಮೂಲಕ ಅನುಗ್ರಹಿಸಿದ್ದರೆ, ಪ್ರತಿಯೊಬ್ಬರ ಪಿಂಡಾಂಡದಲ್ಲೂ ಆರು ನಾಡೀಕೇಂದ್ರಗಳಲ್ಲಿ ಮತ್ತೆ ಮತ್ತೆ ನೆಲೆಸಿ ಅಮೃತವನ್ನು ಆ ಆರು ನಾಡೀಕೇಂದ್ರಗಳಿಂದಲೂ ಮತ್ತೆ ಮತ್ತೆ ಅಮೃತವನ್ನು ಸುರಿಸುತ್ತನಡೆಸುವ ಲೀಲೆಯನ್ನು ಚಿಂತಿಸುತ್ತಿರಬೇಕು.
*ಶ್ರೀ ವಿಜಯದಾಸಾರ್ಯ ವಿರಚಿತ*
*ಶ್ರೀಧನ್ವಂತರಿ ದೇವರ ಸ್ತೋತ್ರ ಸುಳಾದಿ*
*ರಾಗ ನಾದನಾಮಕ್ರಿಯಾ*
*ಧ್ರುವತಾಳ*
ಆಯು ವೃದ್ಧಿಯಾಗೋದು ಶ್ರೇಯಸ್ಸು ಬರುವದು
ಕಾಯ ನಿರ್ಮಲಿನ ಕಾರಣವಾಹುದು
ಮಾಯಾ ಹಿಂದಾಗುವದು ನಾನಾ ರೋಗದ ಬೀಜ
ಬೇಯಿಸಿ ಕಳೆವದು ವೇಗದಿಂದಾ
ನಾಯಿ ಮೊದಲಾದ ಕುತ್ಸಿತದೇಹ ನಿ -
ಕಾಯವ ತೆತ್ತು ದುಷ್ಕರ್ಮದಿಂದ
ಕ್ರೀಯಮಾಣ ಸಂಚಿತ ಭರಿತವಾಗಿದ್ದ ದುಃಖ
ಹೇಯ ಸಾಗರದೊಳು ಬಿದ್ದು ಬಳಲೀ
ನೋಯಿಸಿಕೊಂಡು ನೆಲೆಗಾಣದೆ ಒಮ್ಮೆ ತನ್ನ
ಬಾಯಲ್ಲಿ ವೈದ್ಯಮೂರ್ತಿ ಶ್ರೀ ಧನ್ವಂತ್ರಿ
ರಾಯಾ ರಾಜೌಷಧಿ ನಿಯಾಮಕ ಕರ್ತಾ
ಶ್ರೀಯರಸನೆಂದು ತುತಿಸಲಾಗಿ
ತಾಯಿ ವದಗಿ ಬಂದು ಬಾಲನ್ನ ಸಾಕಿದಂತೆ
ನೋಯಗೊಡದೆ ನಮ್ಮನು ಪಾಲಿಪಾ
ಧ್ಯೇಯಾ ದೇವಾದಿಗಳಿಗೆ ಧರ್ಮಜ್ಞ ಗುಣಸಾಂದ್ರ
ಶ್ರೇಯಸ್ಸು ಕೊಡುವನು ಭಜಕರಿಗೆ
ಮಾಯಾ ಮಂತ್ರದಿಂದ ಜಗವೆಲ್ಲ ವ್ಯಾಪಿಸಿ ಸ -
ನ್ಯಾಯವಂತನಾಗಿ ಚೇಷ್ಟೆ ಮಾಳ್ಪಾ
ವಾಯುವಂದಿತ ನಿತ್ಯ *ವಿಜಯವಿಟ್ಠಲರೇಯಾ*
ಪ್ರೀಯನು ಕಾಣೊ ನಮಗೆ ಅನಾದಿರೋಗ ಕಳೆವಾ ॥ 1 ॥
*ಮಟ್ಟತಾಳ*
ಧನ್ವಂತ್ರಿ ಶ್ರೀ ಧನ್ವಂತ್ರೀ ಎಂದು
ಸನ್ನುತಿಸಿ ಸತತ ಭಿನ್ನ ಜ್ಞಾನದಿಂದ
ನಿನ್ನವ ನಿನ್ನವನೆಂದು ಘನ್ನತಿಯಲಿ ನೆನೆವ
ಮನ್ನುಜ ಭೂವನದೊಳು ಧನ್ಯನು ಧನ್ಯನೆನ್ನಿ
ಚನ್ನ ಮೂರ್ತಿ ಸುಪ್ರಸನ್ನ *ವಿಜಯವಿಟ್ಠ -*
*ಲನ್ನ* ಸತ್ಯವೆಂದು ಬಣ್ಣಿಸು ಬಹು ವಿಧದಿ ॥ 2 ॥
*ತ್ರಿವಿಡಿತಾಳ*
ಶಶಿಕುಲೋದ್ಭವ ಧೀರ್ಘತಮ ನಂದನ ದೇವಾ
ಶಶಿವರ್ಣ ಪ್ರಕಾಶ ಪ್ರಭುವೆ ವಿಭುವೆ
ಶಶಿಮಂಡಲ ಸಂಸ್ಥಿತ ಕಲಶ ಕಲಶಪಾಣಿ
ಬಿಸಜಲೋಚನ ಅಶ್ವಿನೇಯ ವಂದ್ಯಾ
ಶಶಿಗರ್ಭ ಭೂರುಹ ಲತೆ ಪೊದೆ ತಾಪ ವೋ -
ಡಿಸುವ ದಿವ್ಯೌಷಧಿ ತುಲಸಿಜನಕಾ
ಅಸುರ ನಿರ್ಜರತತಿ ನೆರೆದು ಗಿರಿಯ ತಂದು
ಮಿಸುಕದಲೆ ಮಹೋದಧಿ ಮರ್ದಿಸಲಾಗಿ
ನಸುನಗುತ ಪುಟ್ಟಿದೆ ಪೀಯೂಷ ಘಟ ಧರಿಸಿ
ಅಸಮ ದೈವನೆ ನಿನ್ನ ಮಹಿಮೆಗೆ ನಮೋ ನಮೋ
ಬಿಸಜ ಸಂಭವ ರುದ್ರ ಮೊದಲಾದ ದೇವತಾ
ಋಷಿನಿಕರ ನಿನ್ನ ಕೊಂಡಾಡುವರೋ
ದಶದಿಶದೊಳು ಮೆರೆವ *ವಿಜಯವಿಟ್ಠಲ* ಭಿಷ್ಕಾ
ಅಸು ಇಂದ್ರಿಯಂಗಳ ರೋಗ ನಿವಾರಣ ॥ 3 ॥
*ಅಟ್ಟತಾಳ*
ಶರಣು ಶರಣು ಧನ್ವಂತರಿ ತಮೋಗುಣ ನಾಶಾ
ಶರಣು ಆರ್ತಜನ ಪರಿಪಾಲಕ , ದೇವ -
ತರುವೆ, ಭವತಾಪಹರಣ , ದಿತಿಸುತ -
ಹರಣ , ಮೋಹಕ ಲೀಲಾ
ಪರಮಪೂರ್ಣಬ್ರಹ್ಮ ಬ್ರಹ್ಮ ಉದ್ಧಾರಕ
ಉರುಪರಾಕ್ರಮ ಉರಗಶಾಯಿ
ವರ ಕಿರೀಟ ಮಹಾಮಣಿ ಕುಂಡಲ ಕರ್ಣ
ಮಿರಗುವ ಹಸ್ತಕಂಕಣ ಹಾರಪದಕ
ಹೀರ ಕಾಂಚಿ ಪೀತಾಂಬರ ಚರಣಭೂಷಾ
ಸಿರಿವತ್ಸಲಾಂಛನ *ವಿಜಯವಿಟ್ಠಲರೇಯಾ*
ತರುಣ ಗಾತುರ ಜ್ಞಾನಮುದ್ರಾಂಕಿತ ಹಸ್ತಾ ॥ 4 ॥
*ಆದಿತಾಳ*
ಏಳುವಾಗಲಿ ಮತ್ತೆ ತಿರುಗಿ ತಿರುಗುತಲಿ
ಬೀಳುವಾಗಲಿ ನಿಂತು ಕುಳ್ಳಿರುವಾಗಲಿ
ಹೇಳುವಾಗಲಿ ಮಾತು ಕೇಳುವಾಗಲಿ ಕರೆದು
ಪೇಳುವಾಗಲಿ ಪೋಗಿ ಸತ್ಕರ್ಮ ಮಾಡುವಾಗ
ಬಾಳುವಾಗಲಿ ಭೋಜನ ನಾನಾ ಷಡ್ರಸ ಸ -
ಮ್ಮೇಳವಾಗಲಿ ಮೇಲು ಪುತ್ರಾದಿ ಒಡನೊಡನೆ
ಖೇಳವಾಗಿ ಮನುಜ ಮರಿಯಾದೆ ನಿನ್ನಯ
ನಾಲಿಗೆ ಕೊನೆಯಲ್ಲಿ ಧನ್ವಂತ್ರಿ ಎಂದು ಒಮ್ಮೆ
ಕಾಲಕಾಲದಲ್ಲಿ ಸ್ಮರಿಸಿದರೆ ಅವಗೆ
ವೇಳ್ಯ ವೇಳ್ಯೆಗೆ ಬಾಹ ಭವಬೀಜ ಪರಿಹಾರ
ನೀಲಮೇಘಶ್ಯಾಮ *ವಿಜಯವಿಟ್ಠಲರೇಯಾ*
ವಾಲಗ ಕೊಡುವನು ಮುಕ್ತರ ಸಂಗದಲಿ ॥ 5 ॥
*ಜತೆ*
ಧಂ ಧನ್ವಂತ್ರೀ ಎಂದು ಪ್ರಣವ ಪೂರ್ವಕದಿಂದ
ವಂದಿಸಿ ನೆನೆಯಲು *ವಿಜಯವಿಟ್ಠಲ* ಒಲಿವಾ ॥
*ಲಘುಟಿಪ್ಪಣಿ :*
*ಧ್ರುವತಾಳ :*
*ಕಾಯನಿರ್ಮಲಿನ* = ಶರೀರದ ಶುದ್ಧಿಗೆ ;
*ನಿಕಾಯ* = ಗುಂಪು ;
*ಓಷಧಿನಿಯಾಮಕ* = _ಸ ಜ್ಯಾಯಾನ್ ಸರ್ವಭೂತೇಭ್ಯಸ್ತಸ್ಮಾತ್ಸರ್ವೌಷಧಂ ಸ್ಮೃತಃ ।_ _ಸಂಸಾರೇ ದಹ್ಯಮಾನಾನಾಮಾಶ್ರಯತ್ವಾತ್ಸ ಔಷಧಮ್ ॥_
ಶ್ರೀಹರಿಯು ಸರ್ವಭೂತಗಳಲ್ಲಿಯೂ ಶ್ರೇಷ್ಠನಾದುದರಿಂದ " *ಸರ್ವೌಷಧ* "ನೆಂದು ಪ್ರಸಿದ್ಧನಾಗಿದ್ದಾನೆ. ಸಂಸಾರತಾಪದಿಂದ ಸುಟ್ಟು ಬಳಲುವವರಿಗೆ ಅತ್ಯಂತ ಆಶ್ರಯನಾದುದರಿಂದಲೂ ಆತನು " *ಔಷಧ* " ರೂಪನಾಗಿದ್ದಾನೆ. (ತೈತ್ತರೀಯಭಾಷ್ಯ)
*ರಾಜೌಷಧಿನಿಯಾಮಕ* = ಚಂದ್ರನ ಅಂತರ್ಯಾಮಿಯಾಗಿದ್ದು , ಔಷಧಿಗಳಿಗೆ ನಿಯಾಮಕ ;
*ಮಾಯಾಮಂತ್ರದಿಂದ* = ಆಭಿಚಾರಿಕ ಕೃತ್ಯಗಳಿಂದ ;
*ಸನ್ಯಾಯವಂತನಾಗಿ* = ಸುಜನರಿಗೆ ಬಾಧೆಯಾಗದಂತೆ ;
*ತ್ರಿವಿಡಿತಾಳ :*
*ಕಲಶ ಕಲಶಪಾಣಿ* = ನೀರು ಬಡಿಸುವ ಒಂದು ಕಲಶ . ಇನ್ನೊಂದು ಅಮೃತಪೂರಿತ ಕಲಶ ಉಳ್ಳವ ;
*ಅಶ್ವಿನೇಯ* = ಅಶ್ವಿನೀದೇವತೆಗಳು ;
*ಭಿಷ್ಕ* = ಭಿಷಕ್ = ವೈದ್ಯ ;
*ಅಸು ಇಂದ್ರಿಯಗಳ* = ಪ್ರಾಣೇಂದ್ರಿಯಗಳ;
*ಅಟ್ಟತಾಳ :*
*ಬ್ರಹ್ಮಉದ್ಧಾರಕ* = ಬ್ರಹ್ಮ - ವೇದ ಅಂದರೆ ಆಯುರ್ವೇದ(ಉಪವೇದ) ಅಂತ ಅಭಿಪ್ರಾಯ ; _ವೇದಸ್ತತ್ವಂ ತಪೋ ಬ್ರಹ್ಮ_ - ಅಮರಕೋಶ.
*ಆದಿತಾಳ :*
*ಖೇಳ* = ಮಾತುಕಥೆ - ವಿನೋದಗೋಷ್ಠಿ ;
*ವಾಲಗ* = ಸೇವೆ ;
*ಬಾಳುವಾಗಲಿ* =
(1) ಹರಕೆಯನ್ನು ಹೊತ್ತು ಅದನ್ನು ಪೂರೈಸಲೋಸುಗ ತಿರುಪತಿಯ ಶ್ರೀನಿವಾಸನ ದರ್ಶನಕ್ಕೆ ಹೋಗುವಾಗ ಸತ್ಪಾತ್ರರಿಗೆ ಕೊಡುವ ಭೋಜನಕ್ಕೆ ' *ಬಾಳು* ' ಎಂದು ಹೆಸರು.
(2) ಸಾರ್ಥಕವಾದ ದೀರ್ಘಾಯುಷ್ಯವುಳ್ಳವನಾಗಿ ' *ಬಾಳು* ' ಎಂದು ಆಶೀರ್ವಾದ ಮಾಡುವಾಗ ;
*ವಿವರಣೆ :*
*ಹರಿದಾಸರತ್ನಂ ಶ್ರೀಗೋಪಾಲದಾಸರು*
ಶ್ರೀವಿಜಯದಾಸಾರ್ಯ ವಿರಚಿತ
ಬಹಿರಂತರ ರೋಗನಿವಾರಣ ಸುಳಾದಿ
[ ಶ್ರೀ ಧನ್ವಂತ್ರಿದೇವರ ಸ್ತೋತ್ರ ಸುಳಾದಿ ಇದು.
ಶ್ರೀ ಧನ್ವಂತ್ರಿ ಅವತಾರ ಸ್ತೋತ್ರ ಸುಳಾದಿ (ಆಯು ವೃದ್ಧಿಯಾಗೋದು ಶ್ರೇಯಸ್ಸು ಬರುವದು) ಯ ಜೊತೆಗೆ ಇದನ್ನೂ ಪಾರಾಯಣ ಮಾಡಿದರೆ ಪೂರ್ಣಫಲವೆಂದು ಬಲ್ಲವರು ಹೇಳುತ್ತಾರೆ. ಪರಮಾತ್ಮನ ನಾಮವೆಂಬ ಔಷಧಕ್ಕೆ ಬಹಿರಂತರ ರೋಗ ನಿವಾರಣವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ.]
ರಾಗ ಮಧ್ಯಮಾವತಿ
ಧ್ರುವತಾಳ
ರೋಗ ನಿವಾರಣವಾಗುವದಿದು ಮಹಾ
ಯೋಗಿಗಳು ನೆರೆದು ನಿಗಮ ಸುಪುರಾಣ
ಭಾಗವತ ಪಂಚರಾತ್ರಾಗಮವ ಶೋಧಿಸಿ
ವೇಗದಿಂದಲಿ ದುಗ್ಧಸಾಗರ ಮಧ್ಯದೊಳಗೆ
ನಾಗರಾಜನ ಮೇಲೆ ಯೋಗನಿದ್ರೆಯೊಳಿಪ್ಪ
ವಾಗೀಶ ಪಿತನ ಇಂಬಾಗಿ ನೆನಿಸಲು
ಪೋಗುವದಘವೆಂದು ಯೋಗೀಶ್ವರರು ಶಿರ -
ದೂಗಿ ಸಾಕುವರು ಚನ್ನಾಗಿ ಶ್ರೀಹರಿಯ ನಾಮ
ಈಗ ಸಂಸಾರವೆಂಬೊ ಬ್ಯಾಗಿ ಮಧ್ಯದ ನರರು
ಜಾಗುಮಾಡದೆ ಬಲು ಜಾಗರರಾಗಿ ತಂಬ -
ಲಾಗುವಂತೆ ಉಂಡು ತೇಗಿ ತೃಪ್ತಿ ಬಡುವದು
ಭೋಗಾನಂದಾ ನಿಮಗೆ ಯೋಗಾನಂದ
ಹಾಗಾರಾಹಾಗವಿತ್ತು ಲೋಗರ ಕೈಯಿಂದ
ತೂಗಿ ಬೆಲಿಗೆ ವಸ್ತಾ ವೇಗ ತರುವದಲ್ಲ
ಶ್ರೀಗುರು ಧನ್ವಂತ್ರಿ ವಿಜಯವಿಟ್ಠಲನಾಮ ದ್ವೇಷ -
ಭಾಗಿಗಳಿಗೆ ಸಲ್ಲಾ ಶ್ರೀಗೌರಿಪತಿ ಬಲ್ಲಾ ॥ 1 ॥
ಮಟ್ಟತಾಳ
ಅಡಿವಿ ಗಿಡವ ತುಕ್ಕಿ ಆಗಳಿ ತರುವದಲ್ಲ
ಕೊಡಲಿಯಲಿ ಕಡಿದು ಪೊತ್ತು ತರುವದಲ್ಲ
ಪುಡಿಮಾಡಿ ಅರದು ಮುದ್ದೆ ಮಾಡುವದಲ್ಲ
ಅಡಿಗಿಯನೆ ಮಾಡಿ ಪಾಕಕ್ಕಿಳಿಪದಲ್ಲ
ಅಡಿಗಡಿಗೆ ಬಾಯ್ದೆರೆದು ಬೇಡುವದು ಅಲ್ಲ
ಕೊಡರು ಪರರು ಎಂದು ದುಃಖಬಡುವದಲ್ಲ
ಬಡವ ಭಾಗ್ಯವಂತರೆಂಬ ವಚನ ಸಲ್ಲ
ಪೊಡವಿಯೊಳಗೆ ಬಲು ಸವಿಯಾದೌಷಧವೊ
ಕುಡಿಯ ಬಲ್ಲವರಿಗೆ ರುಚಿ ಬಲುರುಚಿ ಕಾಣೊ
ಕಡಲಶಯನ ನಮ್ಮ ವಿಜಯವಿಟ್ಠಲರೇಯನ
ಕಡು ನಾಮಾಮೃತವು ಸರ್ವರೋಗಹರವು ॥ 2 ॥
ತ್ರಿವಿಡಿತಾಳ
ಪಥ್ಯ ಮಾಡುವದಲ್ಲ ಅನುಪಾನ ಮೊದಲಿಲ್ಲ
ಪೈತ್ಯಹೆಚ್ಚಿತು ಎಂದು ಬಳಲಿ ಬೀಳುವದಲ್ಲ
ಶೈತ್ಯ ವಾತ ಭ್ರಮಣ ಮೇಹ ಹೆಚ್ಚುವದಲ್ಲ ಅ -
ಪಥ್ಯವಾಯಿತು ಎಂದು ಶೋಕಿಸುವದು ಸಲ್ಲ
ನಿತ್ಯಕೊಳ್ಳಲು ಲೇಶ ರುಚಿ ಕೆಡುವದಲ್ಲ
ಸತ್ಯವಲ್ಲದೆ ಇದು ಎಂದಿಗೂ ಪುಶಿಯಲ್ಲ
ಮೃತ್ಯು ಮೃತ್ಯುವಿನ ದೂತರಿಗೆ ಕಕ್ಕಸವಾಗಿಪ್ಪದು
ಭೃತ್ಯರಾದವರಿದು ಪಾಲಿಸುತಿಪ್ಪದು
ಸತ್ಯವಲ್ಲಭ ಸಿರಿ ವಿಜಯವಿಟ್ಠಲ ರಂಗನ್ನ
ಸ್ತುತ್ಯಾವ ಮಾಳ್ಪರ ಮನಕೆ ಶೋಭಿಸುವದು ॥ 3 ॥
ಅಟ್ಟತಾಳ
ಸರಿ ಬಂದದುಣಲುಂಟು ಸರಿ ಬಂದ ಕಾಲಕ್ಕೆ
ಸರಿ ಸರಿ ಬಂದಂತೆ ಸುರಿದು ಸುಖಿಸೆ ತನ್ನ
ಜರೆ ಮರಣ ಜಡ ಜ್ವರ ರೋಗಗಳು
ಉರುಳಿ ಪೋಗುವವಯ್ಯಾ
ಸುರಕ್ಷಿತವಾಗಿಹಪರದಲ್ಲಿ ಪೊರವದು
ಸುರಮುನಿನುತ ಸಿರಿ ವಿಜಯವಿಟ್ಠಲರೇಯನ
ನೆರೆನಂಬಿದವರಿಗೆ ಹಿರಿದಾಗಿ ವೊಲಿವದು ॥ 4 ॥
ಆದಿತಾಳ
ಬುದ್ಧಿವಂತರೆಲ್ಲರಿದು ಮೆದ್ದು ಸವಿನೋಡಿ ಜಗಕೆ
ಶುದ್ಧ ಜೀವಿಗಳಿಗಿದು ಸಿದ್ದವೆಂದು ಧರೆಗೆ ಬೀರೇ
ಎದ್ದು ಮಲಗಿ ಕುಳಿತು ಇದ್ದು ತಿರುಗಾಡುತ
ಇದ್ದಕಾಲಕೆ ಸಮೀಪ ಹೊದ್ದುಕೊಂಡು ಇಪ್ಪದು
ಉದ್ದಿನಷ್ಟು ಪಾಪಾವ ಹೊದ್ದುಗೊಡದೆ ಓಡಿಸಿ ಜ್ಞಾ -
ನಾಬ್ಧಿಯೊಳಗಿಡುವುದು ಶ್ರದ್ಧಾ ವೈರಾಗ್ಯವಿತ್ತು
ಮುದ್ದುರಂಗ ವಿಜಯವಿಟ್ಠಲ ವೈದ್ಯನೆ ತಾನಾಗಿ ನಿಂದು ಬದ್ಧವಾಗಿದ್ದ ಭವಕೆ ಮದ್ದು ಇತ್ತು ಮಾಣಿಸುವಾ ॥ 5 ॥
ಜತೆ
ಬಹಿರಂತರರೋಗ ನಿವಾರಣವಾಗುವದು
ಅಹಿಶಾಯಿ ವಿಜಯವಿಟ್ಠಲನ ನಾಮ ಔಷಧಕೆ ॥
ಲಘುಟಿಪ್ಪಣಿ : ಹರಿದಾಸರತ್ನಂ ಶ್ರೀಗೋಪಾಲದಾಸರು
ಬ್ಯಾಗಿ = ಬೇಗೆ ಅಂದರೆ ತಾಪ ;
ಜಾಗುಮಾಡದೆ = ಸುಮ್ಮನಿರದೆ - ಸಾಧನೆಮಾಡದೆ ;
ಜಾಗರರಾಗಿ = ಎಚ್ಚರಿಕೆ ಉಳ್ಳವರಾಗಿ ;
ತಂಬಲಾಗುವಂತೆ = ಸಂಪೂರ್ಣಲಸ ಆಸ್ವಾದನೆಯಾಗುವಂತೆ ;
ಹಾಗಾರಹಾಗವಿತ್ತು = ಹಾಗ (ಎರಡು ಕಾಸು) ;
ಅರಹಾಗ = ಒಂದು ಕಾಸು ;